ಅಂಕೋಲಾ : ಅಕ್ರಮವಾಗಿ ಬ್ಯೂಟಿ ಪಾರ್ಲರ್ ನಡೆಸುತ್ತಿರುವ ನೇಪಾಳಿ ಮಹಿಳೆಯ ಮೇಲೆ ಕ್ರಮ ಕೈಗೊಳ್ಳುವಂತೆ ಹಾಗೂ ಬ್ಯೂಟಿಶಿಯನ್‌ಗಳನ್ನ ಅಸಂಘಟಿತ ಕಾರ್ಮಿಕರೆಂದು ಗುರುತಿಸುವಂತೆ ಆಗ್ರಹಿಸಿ ಬ್ಯೂಟಿಶಿಯನ್ನರು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಶಾಸಕ ಸತೀಶ್ ಸೈಲ್‌ಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಸಚಿವರು ಹಾಗೂ ಶಾಸಕರನ್ನ ಕರ್ನಾಟಕ ಬ್ಯೂಟಿಶಿಯನ್ ಸಂಘಟನೆಯ ರಾಜ್ಯಾಧ್ಯಕ್ಷ ಎನ್.ನಾಗವೇಣಿ ನೇತೃತ್ವದಲ್ಲಿ ಭೇಟಿಯಾದ ಅಂಕೋಲಾ ತಾಲೂಕು ಬ್ಯೂಟಿಶಿಯನ್ನರು, ಮನವಿ ಸಲ್ಲಿಸಿ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿಕೊಂಡರು.
ನೇಪಾಳ ಮೂಲದ ಮಹಿಳೆಯೊಬ್ಬರು ಕಳೆದ ಅನೇಕ ವರ್ಷಗಳಿಂದ ಅಂಕೋಲಾದಲ್ಲಿ ನೆಲೆಸಿದ್ದು, 2012- 13ರಲ್ಲಿ ರೇವ್ ಪಾರ್ಟಿಯೊಂದರಲ್ಲಿ ಸಿಕ್ಕಿಬಿದ್ದಿದ್ದರು, ನಂತರ ಅಂಕೋಲಾದಲ್ಲೇ ಅಕ್ರಮವಾಗಿ ಲೈಸೆನ್ಸ್ ಪಡೆದು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದು, ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿರುವ ಆರೋಪವಿದೆ. ಹೀಗಾಗಿ ಸ್ಥಳೀಯ ಈ ಮಹಿಳೆಯರು ವಿರೋಧ ವ್ಯಕ್ತಪಡಿಸಿ 2020 ರಿಂದ ಪುರಸಭೆ ಹಾಗೂ ಅಂದಿನ ಶಾಸಕರಿಗೆ ಮೇಲಾಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಇದರಿಂದಾಗಿ ಸ್ಥಳೀಯ ಮಹಿಳೆಯರಿಗೆ ಉದ್ಯೋಗ ವಂಚನೆಯಾಗಿದ್ದು, ಅನ್ಯಾಯವಾಗುತ್ತಿದೆ, ಆಕೆಯ ಆಕ್ರಮದ ವಿರುದ್ಧ ತನಿಖೆಯಾಗಬೇಕು ಎಂದರು.
ಇನ್ನು ಬ್ಯೂಟಿಶಿಯನ್ನರನ್ನು, ಅಸಂಘಟಿತ ಕಾರ್ಮಿಕರ ವಲಯಕ್ಕೆ ಸೇರಿಸಿ, ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ನೀಡಬೇಕು. ಕಾರ್ಮಿಕ ಇಲಾಖೆಯಲ್ಲಿ ನಮ್ಮನ್ನು ಬಾರ್ಬರ್ ಎಂದು ನಮೂದಿಸಿ ಐಡಿ ಕಾರ್ಡ್ ನೀಡುತ್ತಿದ್ದು, ನಮಗೆ ಬ್ಯೂಟಿಶಿಯನ್ ಎಂದೇ ನಮೂದಿಸಿ ಕಾರ್ಮಿಕರ ಕಾರ್ಡ್ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶೋಭಾ ಕಾಂಬಳೆ, ಅಧ್ಯಕ್ಷರು, ಮಹಾಸತಿ ಬ್ಯುಟಿಷನ್ ಅಸೋಶಿಯನ್, ಕಾರ್ಯದರ್ಶಿಗ ಸುವರ್ಣ ಪಿ. ಹಾಗೂ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಉಪಸ್ಥಿತರಿದ್ದರು.
