ಅಂಕೋಲಾ : ಕಡಲ ಕಿನಾರೆ ಗಾಬೀತ ಕೇಣಿಯ ಸಮುದ್ರ ತಟದಲ್ಲಿ ತಾಂಡೇಲ್ ತಮಿಳು ಸಿನೇಮಾ ( TAMIL FILM SHOOTING) ಚಿತ್ರೀಕರಣದ  ಭರದ ಸಿದ್ಧತೆ ನಡೆದಿದೆ. ಹದಿನೈದು ದಿನಗಳ ಕಾಲ ನಡೆಯಲಿರುವ ಚಿತ್ರೀಕರಣಕ್ಕಾಗಿ ಸಿದ್ಧತೆ ನಡೆಸಿರುವ ತಂಡ ನಿರ್ಮಿಸಿರುವ ಮೂರು ಸುಂದರ ಮನೆಗಳು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ಗಾಬೀತ ಕೇಣಿಯತ್ತ ಎಲ್ಲರ ಕಣ್ಣು :

ಅಂಕೋಲಾ ಸುಂದರ ಕಡಲ ಕಿನಾರೆಯೊಂದಿಗೆ ಗುರುತಿಸಿಕೊಂಡಿದ್ದು ಸಾಕಷ್ಟು ಚಲನಚಿತ್ರಗಳು ಇಲ್ಲಿ  ಚಿತ್ರೀಕರಣಗೊಂಡಿದೆ. ಬೇಲೆಕೇರಿ, ಹೊನ್ನುಗುಡಿ, ಹೊನ್ನೆಬೈಲ್, ನದಿಭಾಗ, ಕೇಣಿ, ಬೆಳಂಬಾರ ಸಮುದ್ರ ತಟಗಳು ಅಪಾಯ ರಹಿತ ಕಿನಾರೆಗಳಾಗಿ ಗುರುತಿಸಿಕೊಂಡಿವೆ. ಇಲ್ಲಿನ ಕಡಲ ಸೌಂದರ್ಯಕ್ಕೆ ಮನಸೋಲುವ ಚಿತ್ರ ತಂಡದವರು ಚಿತ್ರೀಕರಣಕ್ಕೆ ಮುಗಿಬೀಳುತ್ತಾರೆ. ತಾಂಡೇಲ್ ಚಿತ್ರೀಕರಣದ ಪೂರ್ವ ಸಿದ್ಧತೆಯಲ್ಲಿ ತೊಡಗಿಕೊಂಡಿರುವ ತಂಡದವರು ತುಂಬಾ ಹುಮ್ಮಸ್ಸಿನಲ್ಲಿದ್ದಾರೆ. 50 ಕ್ಕೂ ಹೆಚ್ಚು ಕಾರ್ಮಿಕರು ಮನೆ ನಿರ್ಮಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ತೆಂಗಿನ ನಾರು ಹಾಗೂ ಚೀನಿಮಣ್ಣು ಬಳಸಿ ಗೋಡೆ ಮಾಡಲಾಗುತ್ತಿದೆ. ಮರದಲ್ಲೇ ಬಾವಿ ಮಾಡಲಾಗಿದ್ದು ನಿರ್ಮಿಸುವವರ ಕೌಶಲ್ಯಕ್ಕೆ ಕೈಗನ್ನಡಿಯಾಗಿದೆ.

ಮಾಂಗಟೇಶ್ವರ ಗುಡ್ಡದ ಮೇಲೊಂದು ಮನೆ :

ಗಾಬೀತಕೇಣಿಯ ಮಾಂಗಟೇಶ್ವರ ದೇವಸ್ಥಾನದ ಹಿಂಬದಿಯ ಗುಡ್ಡದ ಮೇಲೆ ಎಲ್ಲರನ್ನೂ ಆಕರ್ಷಿಸುವಂತೆ ಮನೆ ನಿರ್ಮಿಸಲಾಗಿದೆ. ಕಡಲ ತಟದಲ್ಲಿ ಇನ್ನೆರಡು ಮನೆ ನಿರ್ಮಾಣದ ತಯಾರಿ ಜೋರಾಗಿ ಸಾಗಿದೆ. ಭಾವಿಕೇರಿ ಗ್ರಾಮ ಪಂಚಾಯತದಿAದ ಪರವಾನಿಗೆ ಪತ್ರವನ್ನು ಪಡೆದುಕೊಂಡಿರುವ ಚಿತ್ರ ತಂಡ ಡಿ. ೨೩ ರಿಂದ ಜ. ೧೦ ರವರೆಗೆ ಚಿತ್ರೀಕರಣ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಸಕಾಲದಲ್ಲಿ ಚಿತ್ರೀಕರಣ ಪೂರ್ಣಗೊಳ್ಳದಿದ್ದಲ್ಲಿ ಇನ್ನೂ ಕೆಲ ದಿನಗಳವರೆಗೆ ಚಿತ್ರೀಕರಣ ಮುಂದುವರೆಯಲಿದೆ ಎಂದೂ ಹೇಳಲಾಗುತ್ತಿದೆ.  

ನಟ ನಾಗಚೈತನ್ಯ ಮತ್ತು ನಟಿ ಸಾಯಿಪಲ್ಲವಿ :

ತಮಿಳು ಚಿತ್ರದ ಖ್ಯಾತ ನಟ ನಾಗಾರ್ಜುನ ಪುತ್ರ ನಾಗಚೈತನ್ಯ ( actor naga chaitanya )ಹಾಗೂ ಖ್ಯಾತ ನಟಿ ಸಾಯಿಪಲ್ಲಿ ಸೇರಿದಂತೆ ಅನುಭವಿ ಕಲಾವಿದರ ತಂಡ ತಾರಾಂಗಣದಲ್ಲಿದ್ದಾರೆ ಎನ್ನಲಾಗುತ್ತಿದೆ. ನಿರ್ಮಾಪಕ ಅಲ್ಲೂಅರ್ಜುನ ಅವರು ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ತಾಂಡೇಲ ಚಿತ್ರ ಗಾಬೀತಕೇಣಿ ಹಾಗೂ ಕುಂದಾಪುರ ಕಡಲ ಕಿನಾರೆಯಲ್ಲಿ ಬಹುಭಾಗ ಚಿತ್ರೀಕರಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಅಂಕೋಲಾದ ಲಾಡ್ಜ್ಗಳು ಸಂಪೂರ್ಣ ಬುಕಿಂಗ್ :

ತಾ0ಡೇಲ್ ಚಿತ್ರ ಚಿತ್ರೀಕರಣ ಸುಮಾರು ೧೫ ದಿನಗಳವರೆಗೆ ನಡೆಯಲಿದ್ದು ಅಂಕೋಲೆಯ ಪ್ರತಿಷ್ಠಿತ ಲಾಡ್ಜಗಳ ಕೋಣೆಗಳನ್ನು ಮುಂಚಿತವಾಗಿಯೇ ಕಾಯ್ದಿರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸಿನೇಮಾ ಚಿತ್ರೀಕರಣಕ್ಕೂ ಮುನ್ನವೇ ಭಾರೀ ಹವಾ ಎಬ್ಬಿಸಿದ್ದು ಗಾಬೀತಕೇಣಿಯತ್ತ ಎಲ್ಲರ ಕುತೂಹಲದ ಕಣ್ಣುಗಳು ನೆಟ್ಟಿವೆ.