ವರದಿ : ಮಂಜುನಾಥ ನಾಯ್ಕ. ಬೆಳಂಬಾರ.

ಅಂಕೋಲಾ : ಅರಣ್ಯ ಇಲಾಖೆ ಹೊಸಕಂಬಿ, ಶಿಕ್ಷಣ ಇಲಾಖೆ, ಗ್ರಾಮಾರಣ್ಯ ಸಮಿತಿ, ಸಾರ್ವಜನಿಕರು ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಬಿತ್ತೋತ್ಸವ 2022 ಬೀಜ ನೆಡುವ ವಿನೂತನ ಕಾರ್ಯಕ್ರಮ ಅರ್ಥಪೂರ್ಣ ವಾಗಿ ನಡೆಯಿತು.

ಪರಿಸರ ದಿನದ ಅಂಗವಾಗಿ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮವು ಹಿಲ್ಲೂರಿನ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.

ವಿಧ್ಯಾರ್ಥಿಗಳಿಗೆ ಬೀಜದುಂಡೆ ನೀಡುವ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮವನ್ನು ಪ್ರೌಢಶಾಲೆಯ ಮುಖ್ಯಾಧ್ಯಾಪಕ ನಾಗರಾಜ ರಾಯ್ಕರ್ ಉದ್ಘಾಟಿಸಿ ಮಾತನಾಡಿ, ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅರಣ್ಯ ನಾಶ ಮಾಡುತ್ತಿದ್ದು ಇದರ ಪರಿಣಾಮ ಇಂದಿನ ವಾತಾವರಣ ತೀರಾ ಹದಗೆಟ್ಟಿದೆ. ಮನುಷ್ಯನಿಗೆ ಉಸಿರಾಡಲು ಸ್ವಚ್ಛ ಗಾಳಿಯೂ ಕೂಡ ಸಿಗುತ್ತಿಲ್ಲ. ಆದ್ದರಿಂದ ವಿಧ್ಯಾರ್ಥಿಗಳು ಕೂಡ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ ಗಿಡಗಳನ್ನು ನೆಟ್ಟು ಪೋಷಿಸುವಲ್ಲಿ ಸಹಕರಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹೊಸಕಂಬಿ ವಲಯ ಅರಣ್ಯಾಧಿಕಾರಿ ಸುರೇಶ ನಾಯ್ಕ ಅವರು ಮಾತನಾಡಿ ರಸ್ತೆಗಳು, ರೈಲ್ವೆ ಲೈನ್ ಗಳು ಮೊದಲಾದ ಅಭಿವೃದ್ಧಿ ಕೆಲಸಗಳಿಗಾಗಿ ಪದೇ ಪದೇ ಅರಣ್ಯವನ್ನು ನಾಶ ಮಾಡಲಾಗುತ್ತಿದೆ. ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಅಧಿಕ ಪ್ರಮಾಣದಲ್ಲಿ ಮರಗಳನ್ನು ಬೆಳೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಅರಣ್ಯವನ್ನು ಸುಸ್ಥಿರವಾಗಿ ಇಡುವ ದೃಷ್ಟಿಯಿಂದ ಬಿತ್ತೋತ್ಸವ ಕಾರ್ಯಕ್ರಮ ಅಯೋಜಿಸಿದ್ದು ನೈಸರ್ಗಿಕ ಬೀಜವನ್ನು ಬಿತ್ತುವ ಮೂಲಕ ಈ ಅಭಿಯಾನವನ್ನು ಅರಂಬಿಸಲಾಗಿದೆ ಇದರ ಜೊತೆಗೆ ಹಸಿರು ಕರ್ನಾಟಕ, ವನಮಹೋತ್ಸವ, ಶಾಲೆಗೊಂದು ವನ ,ಚಿಣ್ಣರ ವನದರ್ಶನ ಮೊದಲಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಸಹಕರಿಸಬೇಕು ಎಂದರು.

ವೇದಿಕೆಯಲ್ಲಿ ದೈಹಿಕ ಶಿಕ್ಷಕರಾದ ಸುರೇಶ ಬರ್ಗಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಉಮಾಕಾಂತ ನಾಯ್ಕ ಉಪಸ್ಥಿತರಿದ್ದರು.

ಉಪ ವಲಯಅರಣ್ಯಾಧಿಕಾರಿ ದಿವ್ಯಾ ಪಟಗಾರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಉಪ ವಲಯ ಅರಣ್ಯಾಧಿಕಾರಿಗಳಾದ ರಾಘವೇಂದ್ರ ಜೀರ್ಗಾಳಿ, ಪ್ರಶಾಂತ ಪಟಗಾರ, ಸಿ. ಆರ್. ನಾಯ್ಕ, ವೀಣಾ ನಾಯ್ಕ, ಗೌರಿ ಶಂಕರ ರಾಯ್ಕರ, ಅರಣ್ಯ ರಕ್ಷಕರಾದ ಪುಂಡ್ಲಿಕ, ವೆಂಕಟೇಶ, ಗಣೇಶ, ಬಸವನಗೌಡ ಬಗ್ಲಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.