ಪ್ರಾಣಿ ವಧೆಯ ನಿಷೇಧ ದಿನದಂದು ಅಂಕೋಲಾದಲ್ಲಿ ಮಾಂಸ ಮಾರಾಟ :
ದಾಳಿ ನಡೆಸಿದ ಪುರಸಭೆಯ ಮುಖ್ಯಾಧಿಕಾರಿ ಎಚ್. ಅಕ್ಷತಾ

ಅಂಕೋಲಾ : ಪ್ರಾಣಿ ವಧೆಯ ನಿಷೇಧ ದಿನವಾದ ಗಾಂಧಿ ಜಯಂತಿಯ ಬುಧವಾರದಂದು ಪಾರಂ ಕೋಳಿಗಳನ್ನು ವಧೆ ಮಾಡಿ ಮಾರಾಟ ಮಾಡುತ್ತಿದ್ದ ಪಟ್ಟಣದ ಕಾಕರಮಠ ರಸ್ತೆಯ ನೂರಾನಿ ಚಿಕನ್ ಸೆಂಟರ ಮೇಲೆ ಪುರಸಭೆಯ ಮುಖ್ಯಾಧಿಕಾರಿ ಎಚ್. ಅಕ್ಷತಾ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಅ. 2 ರಂದು ಗಾಂಧಿ ಜಯಂತಿ ಆಚರಿಸಲಾಗುತ್ತಿದೆ. ಈ ದಿನದಂದು ದೇಶದಲ್ಲಿ ಪ್ರಾಣಿ ವಧೆ ಮಾಡುವಂತಿಲ್ಲ. ಹೀಗಾಗಿ ಕರ್ನಾಟಕ ಸರಕಾರ ರಾಜ್ಯದಲ್ಲಿ ಚಿಕನ್, ಮಟನ್ ಮಾಂಸ ನಿಷೇಧ ದಿನ ಹೊರಡಿಸಿ, ಮಾಂಸ ಮಾರಾಟವನ್ನು ಕಟ್ಟು ನಿಟ್ಟಾಗಿ ನಿಷೇಧಿಸಿ ಆದೇಶ ಹೊರಡಿಸಿತ್ತು.
ಆದರೆ ಕಾಕರಮಠದ ನೂರದ್ದೀನ್ ಎಮ್. ಶೇಖ ಅವರು ತಮ್ಮ ಮಾಲಕತ್ವದ ನೂರಾನಿ ಚಿಕನ್ ಸೆಂಟರನಲ್ಲಿ ಕೋಳಿ ಮಾಂಸ ಮಾರಾಟ ಮಾಡುತ್ತಿದ್ದಾಗ ಪುರಸಭೆಯ ಮುಖ್ಯಾಧಿಕಾರಿ ಎಚ್ ಅಕ್ಷತಾ, ಪಿಎಸೈ ಉದ್ದಪ್ಪ ಧರೆಪ್ಪನವರ್, ಆರೋಗ್ಯ ನಿರೀಕ್ಷಕ ವಿಷ್ಣು ಗೌಡ, ಪೊಲೀಸ್ ಸಿಬ್ಬಂದಿ ಸಚೀನ್ ನಾಯಕ ದಾಳಿ ನಡೆಸಿ ಕೋಳಿ ಮಾಂಸ ಹಾಗೂ ಪ್ರಕರಣಕ್ಕೆ ಬಳಸಿದ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಮಾಂಸವನ್ನು ಬೊಗ್ರಿಬೈಲನಲ್ಲಿ ಘನ ತಾಜ್ಯ ಘಟಕದಲ್ಲಿ ಸುಟ್ಟು ನಾಶಪಡಿಸಲಾಯಿತು.