ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ
ಅಂಕೋಲಾ : ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಶಿಸ್ತು ಕ್ರಮ ಜರುಗಿಸಿ ಅಂಕೋಲಾ ಪೊಲೀಸ್ ಠಾಣೆಯ ಗುಪ್ತಚರ ಇಲಾಖೆಯ ಸಿಬ್ಬಂದಿ ಪುನೀತ್ ನಾಯ್ಕ ಅವರನ್ನು ಅಂಕೋಲಾ ಠಾಣೆಯಿಂದ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆಗೊಳಿಸಿ ಪೊಲೀಸ್ ವರಿಷ್ಠಾಧಿಕಾರಿಗಳು ಶನಿವಾರ ಆದೇಶ ಹೊರಡಿಸಿದ್ದಾರೆ.
ಅಂಕೋಲಾ ಠಾಣೆಯಲ್ಲಿ ಗುಪ್ತಚರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪುನೀತ್ ನಾಯ್ಕ ಅವರು ತಮ್ಮ ಕರ್ತವ್ಯದಲ್ಲಿ ಲೋಪ ಎಸೆಗಿದ್ದಾರೆ. ಅವರ ಮೇಲೆ ಇಲಾಖಾ ಕ್ರಮ ಜರಗಿಸುವಂತೆ ಡಿವೈಎಸ್ಪಿ ಗಿರೀಶ ಅವರು ನವಂಬರ 1 ರಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಡಿವೈಎಸ್ಪಿ ಗಿರೀಶ ಅವರ ವರದಿಯನ್ನು ಉಲ್ಲೇಖಿಸಿ, ವರದಿಯನ್ನು ಪರಗಣಿಸಿ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಇಲಾಖಾ ಶಿಸ್ತು ಕ್ರಮ ಜರುಗಿಸಿ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆಗೊಳಿಸಲಾಗಿದೆ.
ಮೂಲಗಳ ಪ್ರಕಾರ ಪುನೀತ್ ನಾಯ್ಕ ಅವರು ಜನಸ್ನೇಹಿಯಾಗಿ ಸಾರ್ವಜನಿಕರೊಡನೆ ವರ್ತಿಸದೆ, ತನ್ನದೆ ಆದ ರೀತಿಯಲ್ಲಿ ವ್ಯವಹರಿಸುತ್ತಿದ್ದರಿಂದ ಇಲಾಖೆಗೆ ಸಿಗಬೇಕಾದ ಗುಪ್ತಚರ ಮಾಹಿತಿಗಳು ಪೊಲೀಸರ ಕೈ ತಪ್ಪುತ್ತಿತ್ತು ಎಂಬ ಆರೋಪವು ಇದೆ. ಪುನೀತ್ ನಾಯ್ಕ ಅವರು ನಿಯೋಜನೆಯನ್ನು ರದ್ದುಗೊಳಿಸಿ ಬರಲು ಸಾಕಷ್ಟು ಉನ್ನತ ಮಟ್ಟದಲ್ಲಿ ಪ್ರಯತ್ನಿಸುತ್ತಿರುವ ಮಾಹಿತಿ ಲಭ್ಯವು ಆಗಿದೆ. ಅದೇನೆ ಇದ್ದರೂ ಪುನೀತ್ ನಾಯ್ಕ ಅವರ ಮೇಲೆ ಪೊಲೀಸ್ ಇಲಾಖೆಯ ಶಿಸ್ತು ಕ್ರಮವು ಅಂಕೋಲಾ ನಾಗರಿಕರು ಸ್ವಾಗತಿಸಿದ್ದಾರೆ.