ವರದಿ: ದಿನಕರ ಮಾಸ್ತಿ ಅಲಗೇರಿ

ಅಂಕೋಲಾ: ಹಾಡು ಹಗಲೇ ಕಾಂಗ್ರೆಸ್ ಯುವ ಮುಖಂಡ ಗೋಪಾಲ ಕೃಷ್ಣ ನಾಯಕ ( ಬೆಂಗಳೂರು ಗೋಪು) ಅವರ ಮೇಲೆ ಕೊಲೆ ಯತ್ನ ನಡೆದಿದ್ದು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾದ ಘಟನೆ ತಾಲೂಕಿನ ವೆಂಕಟರಮಣ ದೇವಸ್ಥಾನದ ಸರ್ಕಲ್ ಬಳಿ ಬೆಳಿಗ್ಗೆ 10.30 ರ ಸುಮಾರಿಗೆ ನಡೆದಿದೆ.

ಘಟನೆಯ ವಿವರ:
ಕಟಿಂಗ್ ಸಲೂನ್ ಗೆ ತೆರಳಿದ್ದ ಗೋಪಾಲಕೃಷ್ಣ ಹಾಗೂ ಆತನ ಸ್ನೇಹಿತ ರಾಘು ನಾಯಕ ಜೊತೆ ಮರಳಿ ಬರುವ ವೇಳೆ 6 ಜನರ ಗುಂಪು ಏಕಾಏಕಿ ದಾಳಿ ನಡೆಸಿದೆ. ಆಗ ಅಲ್ಲಿಂದ ತಪ್ಪಿಸಿಕೊಂಡು ವೆಂಕಟರಮಣ ಬೀದಿಯ ಕಡೆಗೆ ಓಡಿದಾಗ ಫುಟ್ ಬಾತ್ ಮೇಲಿದ್ದ ಕಬ್ಬಿಣದ ಸಲಾಕೆಗೆ ಕಾಲು ತಾಗಿ ಗೋಪಾಲಕೃಷ್ಣ ರಸ್ತೆಯ ಮೇಲೆ ಬಿದ್ದಿದ್ದಾರೆ. ಆ ಸಂದರ್ಭದಲ್ಲಿ ಹಿಂಬಾಲಿಸಿ ಬಂದ ಗ್ಯಾಂಗ್ ಚಾಕು ಹಾಗೂ ಕಬ್ಬಿಣದ ಪಂಚ್ ಬಳಸಿ ಕುತ್ತಿಗೆಯ ನೆಲೆ ಶತಾಯ ಗತಾಯ ಪ್ರಹಾರ ನಡೆಸಿದ್ದಾರೆ. ಮತ್ತೆ ಅಲ್ಲಿಂದ ತಪ್ಪಿಸಿಕೊಂಡ ಅವರು ಕಾರವಾರ ರಸ್ತೆಯ ಕಡೆಗೆ ಓಡಿ ಅಲ್ಲಿಂದ ಖಾಸಗಿ ಬ್ಯಾಂಕ್ ಒಂದರಲ್ಲಿ ಹೋಗಿ ಬಾಗಿಲು ಹಾಕಿಕೊಂಡು ಪ್ರಾಣಾಪಾಯದಿಂದ ಪಾರಾದರು.

ಸುಪಾರಿ ಶಂಕೆ:
ಬೇರೆ ಊರಿನಿಂದ ಇಲ್ಲಿಗೆ ಬಂದು ಕೊಲೆ ಯತ್ನ ನಡೆಸಿದ ಘಟನೆ ಗಮನಿಸಿದರೆ ಇದು ಯಾವುದೋ ಬಲಾಡ್ಯ ಶಕ್ತಿಯ ಕೈವಾಡವಿರಬಹುದೇನೋ ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ.

ಸದ್ಯ ಗಾಯಳುವನ್ನು ಪಟ್ಟಣದ ಆರ್ಯ ಮೆಡಿಕಲ್ ಸೆಂಟರ್ ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಘಟನೆಯ ಕಾರಣ ಇನ್ನು ತಿಳಿದು ಬರಬೇಕಿದೆ.

ಆರೋಪಿಗಳು ಗೋವಾ ಗಡಿಯಲ್ಲಿ ಪೊಲೀಸ್ ಬಲೆಗೆ ಬಿದ್ದಿರುವ ಕುರಿತು ಮಾಹಿತಿ ದೊರೆತಿದ್ದು ಎಸ್.ಪಿ. ದೀಪನ್ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಸಿ.ಪಿ.ಐ. ಚಂದ್ರಶೇಖರ್ ಮಠಪತಿ ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಬಾಕ್ಸ್ ನ್ಯೂಸ್:

4 ದಿನಗಳಿಂದ ಹೊಂಚು ಹಾಕಿ ಕುಳಿತ ಖತರ್ನಾಕ್ ಗಳು:

ಮೂಲಗಳ ಪ್ರಕಾರ ಗೋಪಾಲಕೃಷ್ಣ ನಾಯಕ ರನ್ನು ಕೊಲ್ಲಲೆಂದೇ 4 ದಿನಗಳಿಂದ ಹೊಂಚು ಹಾಕಿ ಕುಳಿತ ಈ ಗ್ಯಾಂಗ್ ಬಂದು ದಿನಾಲೂ ಗೋಪಾಲ ಅವರ ಚಲನವಲನ ಗಮನಿಸುತ್ತಿದ್ದರು. ಪ್ರತಿದಿನ ಕಟಿಂಗ್ ಸಲೂನ್ ಗೆ ಬರುವದನ್ನು ಮನದಟ್ಟು ಮಾಡಿಕೊಂಡ ಗ್ಯಾಂಗ್ ಇಂದು ದಾಳಿ ಮಾಡಿದೆ.