ಅಂಕೋಲಾ: ತಾಲೂಕಿನ ಅವರ್ಸಾ ಗ್ರಾಮ ಪಂಚಾಯತಗೆ ಸಂಬಂಧಿಸಿದ ಮೀನು ಮಾರುಕಟ್ಟೆ ಹಾಗೂ ಸೋಮವಾರ ಸಂತೆಯ ವ್ಯಾಪರಸ್ಥರಿಂದ ಹೆಚ್ಚುವರಿ ಕರ ವಸೂಲಿ ಮಾಡುತ್ತಿರುವ ಬಗ್ಗೆ ಸಂತೆ ಮಾರುಕಟ್ಟೆ ಗುತ್ತಿಗೆದಾರ ನಾರಾಯಣ ಸುಬ್ರಾಯ ಹೆಗಡೆ ವಿರುದ್ಧ ಅವರ್ಸಾದ ಹೊನ್ನಪ್ಪ ವಿಠೋಬಾ ನಾಯಕ ಮಾನ್ಯ ಜಿಲ್ಲಾಧಿಕಾರಿಯಲ್ಲಿ ದೂರು ನೀಡಿದ್ದಾರೆ.
ಅವರ್ಸಾ ಗ್ರಾಮ ಪಂಚಾಯತ , ವ್ಯಾಪರಸ್ಥರಿಗೆ ಅನುಕೂಲವಾಗಲೆಂದು ಮಾರುಕಟ್ಟೆಯನ್ನು ನಿರ್ಮಾಣ ಮಾಡಲಾಗಿದ್ದು, ಪ್ರತಿಯಾಗಿ ಕರವನ್ನು ನಿಗದಿಸಿದೆ.
ದಿನದ ಅವಧಿಯಲ್ಲಿ ಸ್ಥಳೀಯ ಮೀನು ಬುಟ್ಟಿಗೆ ಹಾಗೂ ತರಕಾರಿ ಬುಟ್ಟಿಗೆ ತಲಾ 20 ರೂಪಾಯಿಯಂತೆ ಮತ್ತು ಬಾಹ್ಯ ವ್ಯಾಪಾರಸ್ಥರಿಂದ ತಲಾ ಬುಟ್ಟಿಗೆ 30 ರೂಪಾಯಿಯಂತೆ ನಿಗದಿಪಡಿಸಿದೆ. ವಾರದ ಸಂತೆಯಲ್ಲಿ ಹೊರಜಿಲ್ಲೆ ವ್ಯಾಪರಸ್ಥರಿಗೆ ತಲಾ 50 ರೂಪಾಯಿಯಂತೆ ಕರ ನಿಗಧಿ ಮಾಡಲಾಗಿದೆ. ಅವರ್ಸಾ ಗ್ರಾಮ ಪಂಚಾಯತ ಸಾಮಾನ್ಯ ಸಭೆ 19/03/2020 ಆದೇಶದಂತೆ ಸಂತೆ ಮಾರುಕಟ್ಟೆಯ ಟೆಂಡರ್ ಅವಧಿಯನ್ನು ನಿಗಧಿಸಿದ ಕರ ವಸೂಲಾತಿಯೊಂದಿಗೆ ತಾತ್ಕಾಲಿಕವಾಗಿ ಮುಂದಿನ ನಿರ್ಣಯದವರೆಗೆ ವಿಸ್ತರಿಸಿದೆ.
ಆದರೆ ನಾರಾಯಣ ಸುಬ್ರಾಯ ಹೆಗಡೆ ಈತನು ಮೀನು ಮಾರುಕಟ್ಟೆ, ತರಕಾರಿ ಮಾರುಕಟ್ಟೆ ವ್ಯಾಪಾರಿಗಳಿಂದ ನಿಗಧಿಸಿದ ಕರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಿದ್ದು, ಈ ಕುರಿತು ಗ್ರಾಮ ಪಂಚಾಯತ ಗಮನಕ್ಕೆ ತರಲಾಗಿದೆ ಎಂದು ಹೊನ್ನಪ್ಪ ವಿಠೋಬಾ ನಾಯಕ ಆರೋಪಿಸಿದ್ದಾರೆ. ಪಂಚಾಯತ ಷರತ್ತು ಪತ್ರದಲ್ಲಿ ಗೂಡಂಗಡಿ ಬಗ್ಗೆ ಉಲ್ಲೇಖವಿಲ್ಲದಿದ್ದರೂ ರಸೀದಿ ನೀಡದೆ ಅವರಿಂದ ತಲಾ 20 ರೂಪಾಯಿಯಂತೆ ಸಂಗ್ರಹಿಸಿದ್ದು ಅನುಮಾನಸ್ಪದವಾಗಿದೆ.
ಬಡ ಮಹಿಳೆಯ ಮೇಲೆ ದೌರ್ಜನ್ಯವೇ..!
ಷರತ್ತಿನ ಪ್ರಕಾರ ನಾಗಿ ಹಾಲಪ್ಪ ಗೌಡ ಇವಳಿಂದ ದಿನಕ್ಕೆ 30 ರೂಪಾಯಿ ಕರವಸೂಲಿ ಮಾಡಬೇಕಿತ್ತು. ಆದರೆ 2 ವರ್ಷ 50 ರೂಪಾಯಿಯಂತೆ ಸುಮಾರು 14 ಸಾವಿರ ರೂಪಾಯಿ ಹೆಚ್ಚುವರಿ ಕರವಸೂಲಿ ಮಾಡಿದ್ದಾನೆ. ಅನಂತರ 2020 ರ ಫೆಬ್ರುವರಿ ಮಾರ್ಚ ತಿಂಗಳಲ್ಲಿ 70 ರೂಪಾಯಿಯಂತೆ ಹೆಚ್ಚುವರಿಯಾಗಿ 2400 ರೂಪಾಯಿಯನ್ನು ಕರ ವಸೂಲಿ ಮಾಡಿದ್ದು , ನಿರಾಕರಿಸದಾಗ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ .ಕೆಲವು ಮಹಿಳೆಯರ ಮೇಲೆ ದಬ್ಬಾಳಿಕೆಯಿಂದ ನಡೆದುಕೊಂಡಿದ್ದನೆಂದು ಎಂದು ಹೊನ್ನಪ್ಪ ನಾಯಕ ಆರೋಪಿಸಿದ್ದಾರೆ.
ಬಡ ಮಹಿಳೆಯಿಂದ ಅಕ್ರಮವಾಗಿ ವಸೂಲಿ ಮಾಡಿದ ಒಟ್ಟು 16,100 ರೂಪಾಯಿ ಹಣವನ್ನು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಅವಳಿಗೆ ನೀಡಬೇಕು ಕಡೆಗಣಿಸಿದರೆ ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಿಳಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂಬುದು ಹೊನ್ನಪ್ಪ ನಾಯಕ ಅವರ ಆರೋಪವಾಗಿದೆ.
ಕೋವಿಡ್ ಸಮಯದಲ್ಲಿ ಜಿಲ್ಲಾಡಳಿತದ ಪಂಚಾಯತಗೆ ಸಂಬಂಧಿಸಿದ ಮಾರುಕಟ್ಟೆಯನ್ನು ಬಂದ್ ಮಾಡುವಂತೆ ಆದೇಶ ನೀಡಿತ್ತು .ಆ ಸಮಯದಲ್ಲಿ ಪಂಚಾಯತ ಜನರ ಹಿತದೃಷ್ಟಿಯಿಂದ ವ್ಯಾಪಾರವನ್ನು ಕೆಲವು ಸ್ಥಳಗಳಲ್ಲಿ ನಡೆಸಲು ಅವಕಾಶ ಒದಗಿಸಿತ್ತು. ಅಂತಹ ಸಮಯದಲ್ಲೂ ಅಸಮರ್ಪಕ ಕರ ವಸೂಲಾತಿ ಮಾಡಿ ಅಮಾನವೀಯತೆ ಮೆರೆದಿದ್ದಾರೆ. ಮೀನು ಮಾರುಕಟ್ಟೆ ಸ್ವಚ್ಛಗೊಳಿಸಲು ಮಾಸಿಕವಾಗಿ 2 ಸಾವಿರ ರೂಪಾಯಿ ಖರ್ಚಾಗುವುದರಿಂದ ಅದನ್ನು ಉಳಿಸಲು ಆತನು ಬಡ ಮೀನುಗಾರ ಮಹಿಳೆಯರಿಗೆ ಮೀನುಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಲು ನೀಡದೆ, ಅವರನ್ನು ಮಾರುಕಟ್ಟೆ ಹೊರಗಡೆ ಹಾಗೂ ರಾಷ್ಟ್ರೀಯ ಹೆದ್ದಾರಿ ಚರಂಡಿಯ ಸ್ಲ್ಯಾಬ್ ಮೇಲೆ ಬಿಸಿಲಲ್ಲಿ ಕುಳ್ಳಿಸಿ ಅಕ್ರಮ ಕರ ವಸೂಲಾತಿ ನಡೆಸಲಾಗುತ್ತಿದೆ. ವಾರಕ್ಕೆ ಕೇವಲ ಒಂದು ಬಾರಿ ಅಂದರೆ ಸೋಮವಾರ ಮಾತ್ರ ಮಾರುಕಟ್ಟೆ ಸ್ವಚ್ಛತೆ ನಡೆಸಿ , ಅಕ್ರಮ ಹೆಚ್ಚುವರಿ ಹಣ ಸಂಪಾದನೆಯಲ್ಲಿ ತೊಡಗಿದ್ದಾನೆಂದು ಹೊನ್ನಪ್ಪ ವಿಠೋಬಾ ನಾಯಕ , ನಾರಾಯಣ ಸುಬ್ರಾಯ ಹೆಗಡೆ ವಿರುದ್ಧ ದೂರಿದ್ದಾರೆ.
ಅವರ್ಸಾ ಗ್ರಾಮ ಪಂಚಾಯತ ಮೀನು ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ವಾರದ ಸಂತೆ, ಗೂಡಂಗಡಿಗಳ ಟೆಂಡರ್ ಪ್ರಕ್ರಿಯೆಯನ್ನು ಆದಷ್ಟು ಬೇಗ ನಡೆಸಬೇಕು. ನಾರಾಯಣ ಸುಬ್ರಾಯ ಹೆಗಡೆ ಮೇಲೆ ತನಿಖೆ ನಡೆಸಿ ಶಿಕ್ಷೆ ವಿಧಿಸಿ ಅವರ್ಸಾ ಪಂಚಾಯತ ಟೆಂಡರ್ ನಲ್ಲಿ ಭಾಗವಹಿಸಲು ಅವಕಾಶ ನೀಡಬಾರದು. ಒಂದುವೇಳೆ ನೀಡಿದರೆ, ಅವರ್ಸಾ ಗ್ರಾಮ ಪಂಚಾಯತ ಹೆಸರಿಗೆ ಮಸಿ ಬಡಿಯುವ ಕೆಲಸ ಮಾಡಿದಕ್ಕೆ ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ ಎಂದು ಹೊನ್ನಪ್ಪ ವಿಠೋಬಾ ನಾಯಕ ಅವರ್ಸಾ ಎಚ್ಚರಿಸಿದ್ದಾರೆ.
ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/HyQE3CIKWEICSXQCoirwQE