ಜೂ 9 ಕಾರವಾರ: ಮಳೆಗಾಲ ಬರುತ್ತಿರುವುದರಿಂದ ಯಾವುದೇ ರೀತಿಯ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜೂ.9 ರಂದು ಏರ್ಪಡಿಸಲಾಗಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಂಗಾರು ಪೂರ್ವ ಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು ಮಳೆಗಾಲದಲ್ಲಿ ಹರಡಬಹುದಾದ ರೋಗಗಳ ಕುರಿತು ಮುನ್ನೆಚ್ಚರಿಕೆ ಕ್ರಮವಾಗಿ ಔಷಧಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಜನ ಸಂಪರ್ಕಕ್ಕೆ ಸೀಗದ ಪ್ರದೇಶದಲ್ಲಿ ಮೊದಲೇ ಹೋಗಿ ಆರೋಗ್ಯ ಸಂಬಂಧಿ ಸಮಸ್ಯೆ ಇರುವವರರನ್ನು ಗುರುತಿಸಿ ಸ್ಥಳ ಬದಲಾವಣೆ ಮಾಡಬೇಕು ಎಂದು ಸೂಚಿಸಿದರು.
ಜಲಾಶಯದ ಮಟ್ಟ ಹೆಚ್ಚಾಗದಂತೆ ಹಂತ ಹಂತವಾಗಿ ನೀರನ್ನು ಬೀಡಬೇಕು. ವಿದ್ಯುತ್ ಸರಬರಾಜು ಸಮಸ್ಯೆಗೆ ಸಂಬಂಧಿಸಿದಂತೆ ಮೊದಲೇ ಸಲಕರಣೆಗಳನ್ನು ಕ್ರೋಡೀಕರಿಸಿ ಇಡಬೇಕು ಇದರ ಬಗ್ಗೆ gps ಮೂಲಕ ಮಾಹಿತಿ ದೊರಕಬೇಕು. ಕೆರೆ ಕಟ್ಟೆ ಒಡೆದು ಪ್ರವಾಹವಾಗಬಹುದಾದ ಪ್ರದೇಶಗಳ ಬಗ್ಗೆ ಮುಂಜಾಗ್ರತೆ ವಹಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ರಸ್ತೆಗಳ ಸಂಪರ್ಕ ತಡೆಯಾಗದಂತೆ ಕೈಗೊಂಡ ಮುಂಜಾಗ್ರತ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಪ್ರವಾಹ ಆಗುವಂತಹ ಪ್ರದೇಶಗಳಲ್ಲಿ ಫೈಬರ್ ಬೋಟ್ ಗಳ ವ್ಯವಸ್ಥೆ ಮಾಡಿ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಮ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್ ಬದರಿನಾಥ, ನೇವಲ್ ಹಾಗೂ ಇನ್ನಿತರ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.