ಅಂಕೋಲಾ: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಜಾನಪದ ಕಲಾವಿದೆ, ಪದ್ಮಶ್ರೀ ಪುರಸ್ಕೃತೆ, ಸುಕ್ರಿ ಬೊಮ್ಮ ಗೌಡ ಅವರು ತಿಂಗಳಿಗೊಮ್ಮೆ ಮಂಗಳೂರು ಕೆಎಂಸಿ ಆಸ್ಪತ್ರೆಗೆ ತೆರಳಿ ತಪಾಸಣೆಗೊಳಪಡುತ್ತಿದ್ದು, ಅಜ್ಜಿಯ ಚಿಕಿತ್ಸೆ ಸಂಪೂರ್ಣವಾಗಿ ಉಚಿತವಾಗಿ ನಡೆಯುತ್ತಿದೆ. ಆದರೆ ಮನೆಯಾದ ಅಂಕೋಲಾದ ಬಡಗೇರಿಯಿಂದ ಮಂಗಳೂರಿಗೆ ಹೋಗಿಬರಲು, ಆ ನಡುವಿನ ಊಟ- ತಿಂಡಿಗಳಿಗೆ ಆರ್ಥಿಕವಾಗಿ ಸಮಸ್ಯೆ ಅನುಭವಿಸುತ್ತಿದ್ದು, ಲೋಕೋಪಯೋಗಿ ಇಲಾಖೆಯ ಎಂಜಿನಿಯರೊಬ್ಬರು ಸುಕ್ರಜ್ಜಿಗೆ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

86 ವರ್ಷದ ಸುಕ್ರಜ್ಜಿಗೆ ತಿಂಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ವಾರಗಳ ಕಾಲ ಚಿಕಿತ್ಸೆ ಪಡೆದ ಅವರಿಗೆ ಹೃದಯದ ಸಮಸ್ಯೆಯಿಂದ ಉಸಿರಾಟದಲ್ಲಿ ಏರುಪೇರಾಗುವ ಕಾರಣ ಹೃದಯಕ್ಕೆ ಪೇಸ್‌ಮೇಕರ್ ಅಳವಡಿಸಲಾಗಿದ್ದು, ತಿಂಗಳಿಗೊಮ್ಮೆ ಆಸ್ಪತ್ರೆಗೆ ತಪಾಸಣೆಗೆ ಬಂದು ಪೇಸ್‌ಮೇಕರ್ ಜಾರ್ಚ್ ಮಾಡಿಕೊಂಡು ಹೋಗಲು ವೈದ್ಯರು ತಿಳಿಸಿದ್ದಾರೆ. ಇದರಿಂದಾಗಿ ಮನೆಗೆ ಮರಳಿರುವ ಅಜ್ಜಿಗೆ ಮಂಗಳೂರಿಗೆ ಪ್ರತಿ ತಿಂಗಳಿಗೊಮ್ಮೆ ಪ್ರಯಾಣ ಅನಿವಾರ್ಯವಾಗಿದೆ. ಮೊದಲೇ ಬಡತನದಲ್ಲಿ ಜೀವನ ದೂಡುತ್ತಿರುವ ಅಜ್ಜಿಗೆ ಮಂಗಳೂರು ಪ್ರಯಾಣ ದುಬಾರಿಯಾಗಿದೆ. ಪದ್ಮಶ್ರೀಗೆ ಭಾಜನರಾದ ಅಜ್ಜಿಗೆ ಚಿಕಿತ್ಸೆ, ಔಷಧಿಗಳು ಉಚಿತವಾಗಿದ್ದರೂ ಹೋಗಿಬರುವ ವ್ಯವಸ್ಥೆಗಳನ್ನು ಮಾಡಿಕೊಳ್ಳಲಸಾಧ್ಯವಾಗಿದೆ.

ಹೀಗಿರುವಾಗ ಈ ಬಗ್ಗೆ ವಿಷಯ ತಿಳಿದ ಪಿಡಬ್ಲುö್ಯಡಿ ಎಂಜಿನಿಯರ್ ರಾಮು ಅರ್ಗೇಕರ್, ಅಂಕೋಲಾದಿAದ ಮಂಗಳೂರಿಗೆ ಅಜ್ಜಿಯ ಹೋಗಿಬರುವ ಖರ್ಚು, ನಡುವಿನ ಊಟ- ಉಪಹಾರ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ನೋಡಿಕೊಂಡಿದ್ದಾರೆ.

ಸನ್ಮಾನ: ಇತ್ತೀಚಿಗೆ ಅಜ್ಜಿಗೆ ಮಂಗಳೂರಿಗೆ ತಪಾಸಣೆಗೆ ಕರೆದೊಯ್ದ ರಾಮು ಅರ್ಗೇಕರ್, ಊರಿಗೆ ಮರಳುವಾಗ ತಮ್ಮ ಭಟ್ಕಳ ಲೋಕೋಪಯೋಗಿ ಉಪವಿಭಾಗ ಕಚೇರಿಗೆ ಕರೆದೊಯ್ದು ಅವರಿಗೆ ಶಾಲು ಹೊದಿಸಿ, ಫಲ- ತಾಂಬೂಲ ನೀಡಿ ಸನ್ಮಾನಿಸಿ ಗೌರವಿಸಿದರು. ಈ ವೇಳೆ ಸುಕ್ರಜ್ಜಿ ಜಾನಪದ ಗೀತೆಯೊಂದರ ಮೂಲಕ ರಾಮು ಅರ್ಗೇಕರ್ ಅವರಿಗೆ ಧನ್ಯವಾದ ಅರ್ಪಿಸಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಪಾರ್ವತಿ ಶೆಟ್ಟಿ, ಜನಾರ್ಧನ, ಸುಜಕುಮಾರ್, ಅನೀಲ್, ಗಜಾನನ, ಮಂಜು, ಶೀಲಾ ಹಾಜರಿದ್ದರು.