ಶಿರಸಿ: ಕ್ಯಾನ್ಸರ್ ರೋಗದ ಶುಶ್ರೂಷೆಗೆ ಜಿಲ್ಲೆಯ ರೋಗಿಗಳು ಹೊರ ಜಿಲ್ಲೆಗೆ ತೆರಳಬೇಕಾದ ಸ್ಥಿತಿ ಇದೆ. ಹೀಗಾಗಿ, ಟಿಎಸ್ ಎಸ್ ಆಸ್ಪತ್ರೆಯೊಂದಿಗೆ ಸಹಯೋಗ ಮಾಡಿಕೊಂಡಿದ್ದು, ಇಲ್ಲಿಯೇ ಕ್ಯಾನ್ಸರ್ ತಪಾಸಣೆ, ಶುಶ್ರೂಷೆ ನೀಡಲು ನಿರ್ಧರಿಸಿದ್ದೇವೆ ಎಂದು ಎಚ್ ಜಿಸಿ ಆಸ್ಪತ್ರೆ ಪ್ರಮುಖ ಡಾ. ಜಯಕಿಶನ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಕ್ಯಾನ್ಸರ್ ರೋಗಕ್ಕೆ ತಿಂಗಳುಗಳ ಕಾಲ ಶುಶ್ರೂಷೆ ಪಡೆಯಬೇಕಾಗುತ್ತದೆ. ಇದರಿಂದ ಇಲ್ಲಿಯ ರೋಗಿಗಳು ಹುಬ್ಬಳ್ಳಿ ಅಥವಾ ಮಂಗಳೂರಿಗೆ ತೆರಳಿ ಅಲ್ಲಿ ಉಳಿಯಬೇಕಾದ ಸ್ಥಿತಿ ಇದೆ. ರೋಗಿಗಳು ೩೦ ಕಿ ಮಿಗಿಂತ ಜಾಸ್ತಿ ಪ್ರಯಾಣ ಮಾಡಬಾರದು ಎಂಬುದು ನಮ್ಮ ಗುರಿಯಾಗಿದೆ. ಹೀಗಾಗಿ, ಟಿಎಸ್ ಎಸ್ ಎಸ್ ಆಸ್ಪತ್ರೆಯಲ್ಲಿಯೇ ತಪಾಸಣೆ, ಕಿಮೊದಂತಹ ಚಿಕಿತ್ಸೆಯನ್ನು ನೀಡಲು ನಿರ್ಧರಿಸಿದ್ದೇವೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್ ರೋಗಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಎಚ್ ಜಿ ಸಿ ಆಸ್ಪತ್ರೆ ಈಗಾಗಲೇ ೨೪ ಸುಸಜ್ಜಿತ ಆಸ್ಪತ್ರೆಗಳನ್ನು ದೇಶಮಟ್ಟದಲ್ಲಿ ನಡೆಸುತ್ತಿದೆ. ಕ್ಯಾನ್ಸರ್ ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿದರೆ ಸುಲಭವಾಗಿ ಗುಣಪಡಿಸಬಹುದು. ಹೀಗಾಗಿ, ರಾಜ್ಯದ ಮಧ್ಯಮ ಮತ್ತು ಸಣ್ಣ ನಗರಗಳಲ್ಲಿಯೂ ಆಸ್ಪತ್ರೆಗಳೊಂದಿಗೆ ಸಹಯೋಗ ಮಾಡಿಕೊಂಡು ಸಾಧ್ಯವಾದಷ್ಟೂ ತ್ವರಿತ ಚಿಕಿತ್ಸೆ ನೀಡಲು ನಾವು ನಿರ್ಧರಿಸಿದ್ದೇವೆ ಎಂದರು.
ಸ್ಥಳೀಯವಾಗಿಯೇ ಕ್ಯಾನ್ಸರ್ ಚಿಕಿತ್ಸೆ ದೊರೆತರೆ ರೋಗಿಗಳಲ್ಲಿ ಆತಂಕವೂ ಕಡಿಮೆ ಆಗುತ್ತದೆ. ಇದರ ಜೊತೆ ಆಸ್ಪತ್ರೆಯಲ್ಲಿ ಎಡ್ಮಿಟ್ ಆಗದೇ ಸಹ ಚಿಕಿತ್ಸೆ ಪಡೆಯಬಹುದಾಗಿದೆ. ಬೆಂಗಳೂರು, ಹುಬ್ಬಳ್ಳಿ ಆಸ್ಪತ್ರೆಗಳಲ್ಲಿ ನೀಡುವ ಗುಣಮಟ್ಟದ ಚಿಕಿತ್ಸೆಯನ್ನು ಕಡಿಮೆ ದರದಲ್ಲಿ ನೀಡಬಹುದಾಗಿದೆ ಎಂದರು.
ಎಚ್ ಜಿ ಸಿ ಆಸ್ಪತ್ರೆಯ ಡಾ. ವಿಶಾಲ, ಡಾ. ಬಸವರಾಜ, ಟಿಎಸ್ ಎಸ್ ಆಸ್ಪತ್ರೆಯ ಡಾ. ಜೆ ಬಿ ಕಾರಂತ, ಡಾ. ರಾಜಾರಾಮ ಹೆಗಡೆ, ಎಂ ಪಿ ಹೆಗಡೆ ಬಪ್ನಳ್ಳಿ ಇತರರಿದ್ದರು.
ಶಿರಸಿ ತಾಲೂಕಿನ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7
