ಕಾರವಾರ: ಸಮಯ- ಸಂದರ್ಭ ನೋಡದೇ ತುರ್ತು ಪರಿಸ್ಥಿತಿಯಲ್ಲಿದ್ದ ಗರ್ಭಿಣಿಯೊಬ್ಬರ ಹೆರಿಗೆ ಮಾಡಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ತಂಡಕ್ಕೆ ಸ್ಥಳೀಯರು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸನ್ಮಾನಿಸಿ ಗೌರವಿಸಿದರು.

ಬಿಣಗಾದ ಮಹಾಲಸಾ ಟ್ರಾನ್ಸ್ಪೋರ್ಟ್ ವ್ಯವಸ್ಥಾಪಕರಾಗಿರುವ ಪ್ರದೀಪ್ ನಾಯ್ಕ ಅವರ ಪುತ್ರಿ ಪೂನಂ ಅವರು ಖಾನಾಪುರದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ತುಂಬು ಗರ್ಭಿಣಿಯಾಗಿದ್ದರು. ಚೊಚ್ಚಲ ಹೆರಿಗೆಯ ಪ್ರಸವ ವೇದನೆ ಹೆಚ್ಚಾದಾಗ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಶಿವಾನಂದ ಕುಡ್ತರಕರ್ ಅವರ ಗಮನಕ್ಕೆ ತಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅರೆ ಕ್ಷಣ ಮೈಮರೆತರೂ ಪರಿಸ್ಥಿತಿ ಬೇರೆಯೇ ಆಗುವ ಸಾಧ್ಯತೆಯೂ ಇತ್ತು. ಅಂಥ ಸಂದರ್ಭದಲ್ಲಿ ಕುಡ್ತರಕರ್ ಅವರು ಕುಟುಂಬಕ್ಕೆ ಧೈರ್ಯ ತುಂಬಿ, ತಮ್ಮ ತಂಡದೊAದಿಗೆ ತುರ್ತು ಪರಿಸ್ಥಿತಿಯಲ್ಲಿ ಗರ್ಭಿಣಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದು, ಸದ್ಯ ತಾಯಿ ಮತ್ತು ಮಗು ಆರೋಗ್ಯಯುತವಾಗಿದ್ದಾರೆ.

ಹೀಗಾಗಿ ತುರ್ತು ಪರಿಸ್ಥಿತಿಯಲ್ಲಿ ಸಮಯ- ಸಂದರ್ಭ ನೋಡದೇ ತಡವರಿಸದೇ ಹೆರಿಗೆ ಮಾಡಿಸಿ ಗರ್ಭಿಣಿಯನ್ನು ಅಪಾಯದಿಂದ ಪಾರು ಮಾಡಿದ ವೈದ್ಯಕೀಯ ತಂಡಕ್ಕೆ ಬಾಣಂತಿಯ ತಂದೆ ಪ್ರದೀಪ ನಾಯ್ಕ ಹಾಗೂ ಕುಟುಂಬಸ್ಥರು ಜನಶಕ್ತಿ ವೇದಿಕೆಯ ಸಹಯೋಗದೊಂದಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಸನ್ಮಾನಿಸಿದರು. ಕ್ರಿಮ್ಸ್ ನಿರ್ದೇಶಕ ಡಾ.ಗಜಾನನ ನಾಯಕ, ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಶಿವಾನಂದ ಕುಡ್ತರಕರ್, ವೈದ್ಯರುಗಳಾದ ಡಾ.ನರೇಶ್, ಡಾ.ಅಮೃತ, ಡಾ.ಸ್ಪಂದನ, ಡಾ.ಶಶಿರೇಖಾ, ಡಾ.ಅಣ್ಣಪ್ಪ, ಡಾ.ವೆಂಕಟೇಶ, ನರ್ಸ್ಗಳಾದ ಲಕ್ಷ್ಮೀ, ರಾಖಿ, ದೀಪಾ ಅವರುಗಳನ್ನು ಈ ವೇಳೆ ಪೇಟ ತೊಡಿ, ಶಾಲು ಹೊದಿ, ಫಲ ತಂಬೂಲ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ಸರ್ಜನ್ ಶಿವಾನಂದ ಅವರು ಕೇವಲ ಸರಕಾರಿ ಕೆಲಸವೆಂದು ಆಸ್ಪತ್ರೆಗೆ ಬಂದು ಸಹಿ ಮಾಡಿ ಹೋಗದೆ, ಎಂಥದ್ದೇ ತುರ್ತು ಪರಿಸ್ಥಿತಿಯಲ್ಲೂ ಕೂಡ ಧೈರ್ಯದಿಂದ ಕರ್ತವ್ಯ ಪ್ರಜ್ಞೆ ಮೆರೆಯುತ್ತಾರೆ. ಇದರಿಂದಾಗಿ ಅದೆಷ್ಟೋ ಬಡ ಜನರು ತರ್ತು ಸಂದರ್ಭಗಳಲ್ಲೂ ಜಿಲ್ಲಾ ಆಸ್ಪತ್ರೆಯನ್ನು ನೆಚ್ಚಿಕೊಂಡಿದ್ದಾರೆ. ಕೇವಲ ನಿರ್ದೇಶಕರು, ಸರ್ಜನ್‌ಗಳಿಂದ ಮಾತ್ರ ಇವೆಲ್ಲ ಸಾಧ್ಯವಿಲ್ಲ, ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳ ಸಹಕಾರವೂ ಇಲ್ಲಿ ಪರಿಗಣನೆಗೆ ಬರುತ್ತದೆ. ಹೀಗಾಗಿ ಆಸ್ಪತ್ರೆಯ ಎಲ್ಲರೂ ಅಭಿನಂದನಾರ್ಹರು ಎಂದರು. ಇಲ್ಲಿನ ಮೆಡಿಕಲ್ ಕಾಲೇಜಿಗೆ ನಿರ್ದೇಶಕರಾಗಿ ಡಾ.ಗಜಾನನ ನಾಯಕ ಅವರು ಬಂದಾಗಿನಿAದ ದಿನಗಳನ್ನು ಸುವರ್ಣಾಕ್ಷರದಲ್ಲಿ ಬರೆದಿಡಬೇಕು. ಅವರಿಂದ ಆಸ್ಪತ್ರೆಯಲ್ಲಿ ಸಾಕಷ್ಟು ಅಭಿವೃದ್ಧಿಗಳಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ ಓರ್ವ ಮಹಿಳೆಯ ಚಿಕಿತ್ಸೆಗೆ ಮಧ್ಯರಾತ್ರಿ ಕೂಡ ಡೀನ್ ಹಾಗೂ ಸರ್ಜನ್ ಸ್ಪಂದಿಸಿದ್ದನ್ನು ಸ್ಮರಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕಾಧ್ಯಕ್ಷ ರಾಮ ನಾಯ್ಕ ಮಾತನಾಡಿ, ಕಾರವಾರ ಮೆಡಿಕಲ್ ಕಾಲೇಜು ಉತ್ತಮ ಸಾಧನೆಗಳನ್ನು ಮಾಡುತ್ತ ಹೆಸರುಗಳನ್ನು ಗಳಿಸುತ್ತಿದೆ. ಇದಕ್ಕೆನಿರ್ದೇಶಕ ಡಾ.ಗಜಾನನ ನಾಯಕ, ಸರ್ಜನ್ ಡಾ.ಶಿವಾನಂದ ಕುಡ್ತರಕರ್ ಹಾಗೂ ಇಲ್ಲಿಯ ವೈದ್ಯಕೀಯ ತಂಡ, ಸಿಬ್ಬಂದಿಗಳೇ ಕಾರಣ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಖೈರುನ್ನಿಸಾ ಶೇಖ್, ಸೂರಜ್ ಕುರುಮಕರ್, ಸುರೇಶ್ ನಾಯ್ಕ,ರಾಮಾ ನಾಯ್ಕ, ಪ್ರದೀಪ್ ನಾಯ್ಕ ಅವರ ಪುತ್ರ ಪ್ರಣವ್, ಅಳಿಯ ಚಿರಂಜೀವಿ ಕಡ್ಕೋಳ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಿದ್ದರು.