ಅವರ್ಸಾದಲ್ಲಿ ಬಸ್ ತಂಗುದಾಣವಿಲ್ಲದೇ ಪ್ರತಿನಿತ್ಯ ಪರದಾಡುವ ಪ್ರಯಾಣಿಕರು

ಅಂಕೋಲಾ: ತಾಲೂಕಿನ ಅವರ್ಸಾ ಮೂಲಕ ಹಾದು ಹೋಗಿರುವ ರಾಷ್ಟ್ರೀಯ  ಹೆದ್ದಾರಿ 66 ನಿರ್ಮಾಣಗೊಂಡು ಸುಮಾರು 3 ವರ್ಷ ಕಳೆದರೂ ಅವರ್ಸಾ ಜನತೆಗೆ ಬಸ್ ತಂಗುದಾಣದ ಕನಸು ಮಾತ್ರ ಇನ್ನೂ ನನಸಾಗಿಲ್ಲ. ಸುಡುವ ಬಿಸಿಲು, ಸುರಿಯುವ ಮಳೆಯಲ್ಲೇ ನಿಲ್ಲುವ ಪ್ರಯಾಣಿಕರು, ವಿದ್ಯಾರ್ಥಿಗಳು ಬಸ್ ತಂಗುದಾಣವಿಲ್ಲದೇ ಪರದಾಡುವಂತಹ  ಸ್ಥಿತಿ ನಿರ್ಮಾಣವಾಗಿದೆ.

     ಪ್ರತಿನಿತ್ಯ ಅವರ್ಸಾದಿಂದ ಅಂಕೋಲಾ ಹಾಗೂ ಕಾರವಾರದ ಕಡೆ ಸಂಚರಿಸುವ ನೂರಾರು ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ತಂಗುದಾಣವಿಲ್ಲದೇ ಆಶ್ರಯಕ್ಕಾಗಿ ಹತ್ತಿರದ ಅಂಗಡಿ, ಹೊಟೇಲ್‌ಗಳನ್ನು ಹುಡುಕುವಂತ ಪರಿಸ್ಥಿತಿ ಸೃಷ್ಟಿಯಾಗಿದೆ.. ಈ ಅಂಗಡಿಗಳು ಮುಚ್ಚಿರುವ ಸಂದರ್ಭದಲ್ಲಿ ಮಳೆ ಬಿಸಿಲಿಗೆ ಮೈಯೊಡ್ಡಿ ಛತ್ರಿ ಹಿಡಿದು ನಿಲ್ಲಬೇಕಾಗಿದೆ. ಪ್ರಯಾಣಿಕರು ನಿಲ್ಲುವ ಸ್ಥಳದ ಮೇಲೆ ವಿದ್ಯುತ್ ತಂತಿ ಪ್ರಸಾರವಾಗಿದೆ. ಬೆಳಗ್ಗಿನ ಸಮಯದಲ್ಲಿ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಈ ಮಾರ್ಗದಿಂದ ಓಡಾಡುವ ಬಸ್ ಸಂಖ್ಯೆಗಳಿಗಿಂತ ಹೆಚ್ಚಾಗಿದ್ದು, ವಿದ್ಯಾರ್ಥಿಗಳಿಗೆ ಹೆದ್ದಾರಿಯ ಪೂಟ್‌ಪಾತೇ ತಂಗುದಾಣವಾಗಿದೆ. ತಂಗುದಾಣ ಇಲ್ಲದಿರದ ಕಾರಣ ದಿನನಿತ್ಯದ ಬಸ್ ನಿಲುಗಡೆ ಸ್ಥಳವು ಕೂಡ ಸ್ಥಿರವಾಗಿಲ್ಲ. ಇದರಿಂದ ಪ್ರಯಾಣಿಕರು ಓಡೋಡಿ ಬರುವುದರೊಳಗೆ ಬಸ್ ಚಲಾಯಿಸಿದ ಘಟನೆಗಳು ಇಲ್ಲಿ ಸರ್ವೇಸಾಮಾನ್ಯವಾಗಿದೆ. 

    ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಊರುಗಳ ಸಮೀಪ ಪ್ರಯಾಣಿಕರಿಗೆ, ದೂರದ ಸವಾರರಿಗೆ, ಹೆದ್ದಾರಿ ಪ್ರಯಾಣಿಕರಿಗೆೆ ಗ್ರಾಮಗಳ ಹೆಸರು ಸುಲಭವಾಗಿ ಗುರುತಿಸಲೆಂದು ಆ ಊರಿನ ಸಮೀಪ ಹಾಗೂ ತಂಗುದಾಣಗಳ ಬಳಿ ಊರುಗಳ ಹೆಸರು ಬರೆದು ನಾಮಫಲಕ ಹಾಕುವುದು ಸಾಮಾನ್ಯ. ಆದರೆ ಬೇಲೆಕೇರಿ ಟೋಲ್‌ಗೇಟಿನಿಂದ ಹಾರವಾಡದ ರೈಲ್ವೆ ನಿಲ್ದಾಣದವರೆಗೆ ಎಲ್ಲೂ ಕಾಣಸಿಗದ ಅವರ್ಸಾ ನಾಮಫಲಕ ಪ್ರಯಾಣಿಕರಿಗೆ,ವಾಹನ ಸವಾರರಿಗೆ ಗೊಂದಲಕ್ಕೀಡುಮಾಡಿದೆ. ಮೊದಲೇ ಹೆದ್ದಾರಿ ಕಾಮಗಾರಿ ವಿಳಂಬದಿಂದ ಪ್ರಯಾಣಿಕರ ಹಾಗೂ ವಾಹನ ಸವಾರರ ಆಕ್ರೋಶಕ್ಕೆ ಗುರಿಯಾಗಿರುವ ಎನ್.ಎಚ್.ಎ.ಐ, ಅವರ್ಸಾದಲ್ಲಿ ತಂಗುದಾಣ ನಿರ್ಮಿಸದೆ ನಾಮಫಲಕನೂ ಅಳವಡಿಸದೇ ಗ್ರಾಮಸ್ಥರ ಕೆಂಗಣ್ಣಿಗೆ ಕಾರಣವಾಗಿದೆ

ಕಾರವಾರ ಟೈಮ್ಸ್ ನ್ಯೂಸ್  updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…

https://chat.whatsapp.com/HyQE3CIKWEICSXQCoirwQE