ವಿಶೇಷ ವರದಿ- ಸಂದೇಶ ದೇಸಾಯಿ ಜೋಯಿಡಾ
ಜೋಯಿಡಾ: ತಾಲೂಕಿನ ರಾಮನಗರ – ಗೋವಾ ರಾಷ್ಟ್ರೀಯ ಹೆದ್ದಾರಿ ಅಕ್ಷರ ಶಹ ಮೃತ್ಯು ಕೂಪವಾಗಿದೆ. ದಿನೇ ದಿನೇ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚುತ್ತಿವೆ. ತಿನೈಘಾಟದಿಂದ – ಅನಮೋಡವರಗೆ ಹೆದ್ದಾರಿ ಕೆಲಸ ಪೂರ್ಣಗೊಳ್ಳದ ಕಾರಣ ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ.
ಕಳೆದ ನಾಲ್ಕು ವರ್ಷಗಳ ಹಿಂದೆಯೇ ಪ್ರಾರಂಭವಾದ ಕಾಮಗಾರಿ ಈವರೆಗೆ ಮುಗಿಯದ ಕಾರಣ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ತಾಲೂಕಾಡಳಿತ , ಜಿಲ್ಲಾಡಳಿತ, ಶಾಸಕರು, ಜನಪ್ರತಿನಿಧಿಗಳು ತಿಳಿದು ತಿಳಿಯದ ಹಾಗೆ ಇರುವುದು ಬೇಸರದ ಸಂಗತಿಯಾಗಿದೆ.
ತಿನೈಘಾಟ ದಿಂದ ಅನಮೋಡ ವರೆಗೆ ಅಲ್ಲಲ್ಲಿ ರಸ್ತೆ ಮಾಡದೆ ಬಿಡಲಾಗಿದ್ದು , ದಿನವೂ ಸಾವಿರಾರು ವಾಹನಗಳು ಇದೇ ರಸ್ತೆಯಲ್ಲಿ ತಿರುಗಾಡುವುದರಿಂದ ದೊಡ್ಡ ದೊಡ್ಡ ಹೊಂಡಗಳು ಬಿದ್ದಿವೆ, ಮಳೆಗಾಲವಾದ್ದರಿಂದ ಹೊಂಡದಲ್ಲಿ ನೀರು ತುಂಬಿ ವಾಹನಗಳು ಸಾಗುವಾಗ ಹೊಂಡಗಳು ಕಾಣದೇ ಬಹಳಷ್ಟು ವಾಹನಗಳು ಹೊಂಡದಲ್ಲಿ ಬಿದ್ದು ಅಪಘಾತಗಳು ಸಂಭವಿಸಿವೆ.
ಈ ಹಿಂದೆಯೇ ಇಲ್ಲಿನ ರಾಜಕೀಯ ವ್ಯಕ್ತಿಗಳು ಭಾಷಣದಲ್ಲಿ ಅನಮೋಡ ರಾಮನಗರ ರಸ್ತೆ ಅಮೇರಿಕಾ ,ಇಂಗ್ಲೆಂಡ್ ಮಾದರಿಯ ರಸ್ತೆಯಾಗಲಿದೆ ಎಂದು ಹೇಳಿದ್ದರು, ಆದರೆ ಕಳೆದ ಐದು ವರ್ಷಗಳಿಂದ ಇಲ್ಲಿನ ಜನರು ಸಾಮನ್ಯ ರಸ್ತೆಯೂ ಇಲ್ಲದೇ ಪರದಾಟ ನಡೆಸುತ್ತಿದ್ದಾರೆ.
ಸ್ಥಳೀಯರ ಪ್ರತಿಭಟನೆ –
ರಾಮನಗರ ಭಾಗದ ಜನರು ಕೂಡಲೇ ರಸ್ತೆ ಸರಿಪಡಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿ ಪ್ರತಿಭಟನೆಯನ್ನು ನಡೆಸಿದ್ದಾರೆ. ದಿನವೂ ಬಹಳಷ್ಟು ವಾಹನಗಳು ಹೊಂಡಗಳನ್ನು ತಪ್ಪಿಸಲು ಹೋಗಿ ಆಯ ತಪ್ಪಿ ಅಪಘಾತಗಳು ಸಂಭವಿಸುತ್ತಿವೆ. ಎಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಏಕೆ ಯಾರು ಕ್ರಮ ಕೈಗೊಳ್ಳುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಸ್ಥಿತಿಯೇ ಈ ರೀತಿಯಾದರೆ ಇನ್ನೂಳಿದ ರಸ್ತೆಗಳ ಗತಿಯೇನು. ಪಕ್ಕದ ಗೋವಾ ರಾಜ್ಯದ ರಸ್ತೆಗಳನ್ನು ನೋಡಿ ಇಲ್ಲಿನ ಅಧಿಕಾರಿಗಳು ,ಜನಪ್ರತಿನಿಧಿಗಳು ಕೆಲಸ ಮಾಡಬೇಕಿದೆ ಎಂದು ರಸ್ತೆ ಸರಿಪಡಿಸುವಂತೆ ಆಗ್ರಹಿಸಿದ್ದಾರೆ.

ಗೋವಾ – ಅನಮೋಡ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳದೇ ಇರುವುದರಿಂದ ಭಾರವಾದ ವಾಹನಗಳಿಗೆ ಈ ರಸ್ತೆಯಲ್ಲಿ ಅವಕಾಶ ನೀಡುತ್ತಿಲ್ಲ. ಬೆಳಗಾವಿ, ಹುಬ್ಬಳ್ಳಿ, ಸೇರಿದಂತೆ ಇನ್ನೂ ಹಲವು ಕಡೆಗಳಿಂದ ಬರುವ ವಾಹನ ಸವಾರರು ರಸ್ತೆ ಸರಿಯಿಲ್ಲದ ಕಾರಣ ಕಾರವಾರ ಮೂಲಕ ಗೋವಾಕ್ಕೆ ಸಾಗುತ್ತಿದ್ದಾರೆ. ಕಳೆದ ಒಂದು ವಾರದ ಹಿಂದೆ ಹೊಂಡ ತಪ್ಪಿಸಲು ಹೋಗಿ ಆಯ ತಪ್ಪಿ ಕಾರು ಸೇತುವೆಯ ಕೆಳಭಾಗಕ್ಕೆ ಬಿದ್ದು ಐವರು ಸವಾರರು ಗಂಭೀರ ಗಾಯಗೊಂಡಿದ್ದರು.
ಕಳೆದ ನಾಲ್ಕು ವರ್ಷಗಳಿಂದ ಇಲ್ಲಿನ ಸ್ಥಳೀಯ ಜನರು ಮತ್ತು ಗೋವಾಕ್ಕೆ ಸಾಗುವ ಪ್ರವಾಸಿಗರು ರಸ್ತೆ ಸರಿಯಿಲ್ಲದ ಕಾರಣ ಸಮಸ್ಯೆ ಎದುರಿಸುವಂತಾಗಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಸ್ಥಳೀಯ ಶಾಸಕರು ಹಾಗೂ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು, ಗಮನ ಹರಿಸಿ ರಸ್ತೆ ಕೆಲಸ ಪೂರ್ಣಗೊಳಿಸಬೇಕಿದೆ.
ರಸ್ತೆ ಕೆಲಸ ಪೂರ್ಣಗೊಳ್ಳದ ಕಾರಣ ಅಪಘಾತಗಳು ಹೆಚ್ಚಿವೆ. ಸ್ಥಳೀಯ ಶಾಸಕರು ಗಮನ ಹರಿಸಿ ಕೂಡಲೇ ಕೆಲಸ ಪೂರ್ಣಗೊಳ್ಳುವಂತೆ ಸರ್ಕಾರದ ಗಮನಕ್ಕೆ ತರಬೇಕಾಗಿದೆ.
ಗುರಪ್ಪ ಹಣಬರ – ಗ್ರಾ.ಪಂ.ಸದಸ್ಯರು ಅಖೇತಿ
ತಿನೈಘಾಟದಿಂದ ಅನಮೋಡವರೆಗೆ ರಸ್ತೆ ಪೂರ್ಣಗೊಳ್ಳದೇ ಇರುವ ಕಾರಣ ವಾಹನ ಸವಾರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಹೊಂಡ ತಪ್ಪಿಸಲು ಹೋಗಿ ಆಯ ತಪ್ಪಿ ಸೇತುವೆಯ ಕೆಳಭಾಗಕ್ಕೆ ವಾಹನಗಳು ಬೀಳುತ್ತಿವೆ. ಕೂಡಲೇ ರಸ್ತೆ ಸರಿಪಡಿಸಬೇಕಾದ ಅನಿವಾರ್ಯತೆ ಇದೆ.
ರಾಮು ನಾಯ್ಕ – ಸ್ಥಳೀಯರು ,ರಾಮನಗರ
ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/FwQPbtH4lkpE71sGaWxRXj
