ವರದಿ : ದಿನಕರ ನಾಯ್ಕ. ಅಲಗೇರಿ
ಅಂಕೋಲಾ: ಕಳೆದ ಮೂರು ದಿನಗಳಿಂದ ತಾಲ್ಲೂಕಿನಲ್ಲಿ ಬಿರುಗಾಳಿ ಅಹಿತ ಮಳೆಯಾಗುತ್ತಿದ್ದು ತಾಲೂಕಿನ ಜೀವನದಿ ಗಂಗಾವಳಿ ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿದ್ದು ನದಿ ತೀರದ ಜನರಿಗೆ ನೆರೆ ಬೀತಿ ಎದುರಾಗಿದೆ.ತಾಲೂಕಿನಲ್ಲಿ ಬಿರುಗಾಳಿಯ ಅಬ್ಬರ ಜೋರಾಗಿದೆ. ಬಿರುಗಾಳಿ ಜೊತೆಗೆ ಮಳೆಯು ಸುರಿಯುತ್ತಿರುವ ಪರಿಣಾಮ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕೃಷಿ ಭೂಮಿಗಳು ಮತ್ತು ಜನವಸತಿ ಪ್ರದೇಶ ಜಲಾವೃತವಾಗಿದೆ. ಯಲ್ಲಾಪುರ, ಕಲಘಗಟಗಿ ಮತ್ತು ಘಟ್ಟದ ಮೇಲಿನ ಪ್ರದೇಶದಲ್ಲಿ ಬಿರುಸಿನ ಮಳೆ ಆಗುತ್ತಿರುವ ಕಾರಣ ಗಂಗಾವಳಿ ನದಿಯು ಉಕ್ಕಿ ಹರಿದು ಅಪಾಯ ಮಟ್ಟ ತಲುಪಿದೆ. ಈಗಾಗಲೇ ಗಂಗಾವಳಿ ತಟದ ಅನೇಕ ಕುಟುಂಬಗಳನ್ನ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ. ನೆರೆ ಪ್ರದೇಶಕ್ಕೆ ತಹಶಿಲ್ದಾರರ ಪ್ರವೀಣ ಹುಚ್ಚಣ್ಣವರ ಬೇಟಿ ನೀಡುತ್ತಿದ್ದು ಅಂತಹ ಸ್ಥಳದಲ್ಲಿಯೇ ನೋಡಲ ಅಧಿಕಾರಿ ತಂಡದೊಂದಿಗೆ ಅವರೆ ಸ್ವತಃ ಬೀಡು ಬಿಟ್ಟಿದ್ದಾರೆ. ಕಳೆದ 2019 ರಿಂದ ತಾಲ್ಲೂಕು ಸತತ ಭೀಕರ ನೆರೆಗೆ ತುತ್ತಾಗುತ್ತಿದೆ. 2021ರ ಜುಲೈ 21ರಂದು ಹಿಂದೆಂದೂ ಕಾಣದ ಪ್ರವಾಹಕ್ಕೆ ತಾಲ್ಲೂಕಿನ ಜನರು ತತ್ತರಿಸಿ ಹೋಗಿದ್ದರು. ಅಪಾರ ಪ್ರಮಾಣದ ಹಾನಿ ಉಂಟುಮಾಡಿತ್ತು. ಮೂವರು ಪ್ರವಾಹದಲ್ಲಿ ಸಿಲುಕಿ ಮೃತಪಟ್ಟಿದ್ದರು. ಒಂದೇ ದಿನ 14 ಕ್ಕೂ ಅಧಿಕ ಜಾನುವಾರಗಳು ಪ್ರವಾಹದ ಸೆಳೆತಕ್ಕೆ ಕೊಚ್ಚಿ ಹೋಗಿದ್ದವು. 11 ಗ್ರಾಮ ಪಂಚಾಯಿತಿಗಳ ನೂರಕ್ಕೂ ಅಧಿಕ ಗ್ರಾಮಗಳು ಜಲಾವೃತವಾಗಿದ್ದವು. 2022 ರಲ್ಲಿ ಬಿಡುವು ನೀಡಿದ್ದ ಪ್ರವಾಹ ಈಗ ತನ್ನ ಭೀಕರತೆಯ ಅನಾವರಣಕ್ಕೆ ಸಜ್ಜಾದಂತಿದೆ.ತಾಲೂಕಿನ ಕೆಲವೆಡೆ ಮನೆಗಳಿಗೆ ಹಾನಿಯಾಗಿದೆ. ಗಾಳಿಯ ಅಬ್ಬರ ಜೋರಾಗಿರುವ ಪರಿಣಾಮ ಹಲವೆಡೆ ಮರಗಳು ಧರೆಗುರುಳುತ್ತಿವೆ. ನದಿ ತೀರದ ಅಡಿಕೆ ಬಾಳೆ ಮತ್ತು ತೆಂಗಿನ ಮರಗಳು ಹೆಚ್ಚಾಗಿ ಹಾನಿಗೊಳಗಾಗಿವೆ. ಶನಿವಾರ ಮಧ್ಯಾಹ್ನ ಜಾಸ್ತಿ ಆಗಿದ್ದ ಗಂಗಾವಳಿ ನದಿಯ ನೀರಿನ ಮಟ್ಟದಲ್ಲಿ ರಾತ್ರಿ ಸ್ವಲ್ಪ ಕಡಿಮಯಾಗಿತ್ತಾದರೂ ರವಿವಾರ ಮಧ್ಯಾಹ್ನ ಮತ್ತೆ ಏರಿಕೆಯಾಗಿದೆ. ಘಟ್ಟದ ಮೇಲಿನ ನೀರು ಹರಿದು ಬರುತ್ತಿದ್ದು ಅಪಾರ ಪ್ರಮಾಣದ ಕಟ್ಟಿಗೆ ನದಿಯಲ್ಲಿ ತೇಲಿಕೊಂಡು ಬರುತ್ತಿದ್ದೆ. ಯಲ್ಲಾಪುರ ಭಾಗದಲ್ಲಿ ಉತ್ತಮ ಮಳೆ ಆಗುತ್ತಿದ್ದು, ಅಂಕೋಲಾ ತಾಲ್ಲೂಕಿನ ಕರಾವಳಿ ತೀರದ ಜನರು ಆತಂಕದಲ್ಲಿದ್ದಾರೆ. ಎಲ್ಲೆಡೆ ತಾಲೂಕಾಡಳಿತ ತನ್ನ ರಕ್ಷಣಾ ತಂಡವನ್ನು ಸನ್ನದ್ದವಾಗಿಟ್ಟಿದೆ.ಬಾಕ್ಷ ಕಳೆದ ಭಾರಿ ಹೆಚ್ಚು ಅನಾಹುತ ಅಗಿರುವ ಪ್ರದೇಶವಾದ ವಾಸರಕುದ್ರಿಗೆ ಕೊಡ್ಸಣಿ ಗ್ರಾ.ಪಂ ವ್ಯಾಪ್ತಿಯಲ್ಲಿ ಈಗಾಗಲೇ ಗಂಗಾವಳಿ ಮತ್ತೆ ಮುನಿಸುತ್ತಿದ್ದು ರಾತ್ರಿ ಸಮಯದಲ್ಲಿ ಇನ್ನು ನೀರು ಹೆಚ್ಚಾಗುವ ಸಾದ್ಯತೆ ಇದ್ದು ಗ್ರಾ.ಪಂ ಅಧ್ಯಕ್ಷ ಪ್ರದೀಪ ನಾಯಕರವರು ನದಿ ತೀರದ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತಿಳಿಸಿದ್ದಾರೆ. ಅಲ್ಲದೆ ಕೆಲ ಕುಟಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.