ದಿನಕರ ನಾಯ್ಕ ಅಲಗೇರಿ:

ಅಂಕೋಲಾ: ಚಿಂತಕ, ಜನಸೇವಕ, ಕವಿ, ಹೋರಾಟಗಳ ನೇತಾರ ಡಾ. ದಿನಕರ ದೇಸಾಯಿಯವರ 114 ನೇ ಹುಟ್ಟುಹಬ್ಬ ದಿನಕರ ಪ್ರತಿಷ್ಠಾನ ಹಮ್ಮಿಕೊಂಡಿರುವ ಮಾಸಾಚರಣೆಯ ಅಂಗವಾಗಿ ಅವರ ಜನ್ಮಸ್ಥಳ ಅಲಗೇರಿಯಲ್ಲಿ ಸಂಭ್ರಮದಿಂದ ನೆರವೇರಿತು. ಅಲಗೇರಿಯ ಜನಪ್ರತಿನಿಧಿಗಳು ಹಾಗೂ ನಾಗರಿಕರನ್ನೊಳಗೊಂಡ ಕಾರ್ಯಕ್ರಮವನ್ನು ಗ್ರಾಮ ಪಂಚಾಯತದ ಅಧ್ಯಕ್ಷ ಸಂತೋಷ ನಾಯ್ಕ ಉದ್ಘಾಟಿಸಿದರು.

ಸಭೆಯ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಮೋಹನ ಹಬ್ಬು ವಹಿಸಿದ್ದರು. ಸಭೆಯಲ್ಲಿ ದೇಸಾಯಿ ಸಂಘಟಿಸಿದ ಹಿಡಿಕೊಚ್ಚಿನ ಚಳುವಳಿಯಲ್ಲಿ ಪಾಲ್ಗೊಂಡ 81 ವರ್ಷದ ವಿಷ್ಣು ಗಣು ನಾಯ್ಕ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಬಿಎಸ್‌ಎಫ್ ಯೋಧ ಆನಂದು ಗಾಂವಕರ, ಸಣ್ಣಮ್ಮದೇವಿ ಯುವಕ ಸಂಘದ ಅಧ್ಯಕ್ಷ ದಿನಕರ ಬಿ. ನಾಯ್ಕ ಹಾಗೂ ಗಣೇಶ ನಾಯ್ಕ ಮಾತನಾಡಿದರು. ಪ್ರತಿಷ್ಠಾನದ ಉಪಾಧ್ಯಕ್ಷ ಡಾ. ರಾಮಕೃಷ್ಣ ಗುಂದಿ ಜಿಲ್ಲೆಗೆ ದೇಸಾಯಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದರು. ಶಿವಾನಂದ ನಾಯ್ಕ ದಿನಕರರು ರಚಿಸಿದ ಹಾಡುಗಳನ್ನು ಹಾಡಿದರು.

ದಿನಕರರ ವಂಶದ ಕುಡಿ ವಿನಯ ದೇಸಾಯಿ ಚಿತ್ರಪಟಕ್ಕೆ ಮಾಲಾರ್ಪಣೆ ಗೈದರು. ಪ್ರತಿಷ್ಠಾನದ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಬರೆಹಗಾರ ಮಹಾಂತೇಶ ರೇವಡಿ ಪ್ರತಿಷ್ಠಾನದ ದ್ಯೇಯೋದ್ದೇಶಗಳನ್ನು ವಿವರಿಸಿದರು.

ಪ್ರಧಾನ ಭಾಷಣಕಾರ ಪಿ.ಎಂ. ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಫಾಲ್ಗುಣ ಗೌಡ ‘ದಿನಕರ ದೇಸಾಯಿ ಮತ್ತು ರೈತ ಚಳುವಳಿ” ಕುರಿತು ಉಪನ್ಯಾಸ ನೀಡಿದರು.

ಅಲಗೇರಿ ಊರ ಗ್ರಾಮಸ್ಥರು ಅಭಿಮಾನದಿಂದ ಹಿರಿಯ ಸಾಹಿತಿ ವಿಷ್ಣು ನಾಯ್ಕ, ಪ್ರೊ, ಮೋಹನ್ ಹಬ್ಬು, ಡಾ. ಆರ್.ಜಿ. ಗುಂದಿ ಹಾಗೂ ಎಂ.ಬಿ. ಆಗೇರವರನ್ನು ಸನ್ಮಾನಿಸಿ ಗೌರವಿಸಿದರು.

ರವಿ ನಾಯ್ಕ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಜಗದೀಶ ನಾಯಕ ಹೊಸ್ಕೇರಿ ಸ್ವಾಗತಿಸಿದರು. ತುಕಾರಾಮ ನಾಯ್ಕ ನಿರೂಪಿಸಿದರು.