ಅಂಕೋಲಾ : ಪುರಸಭೆಯ ಸದಸ್ಯ, ಶಿಕ್ಷಣ ಪ್ರೇಮಿ ಜಗಧೀಶ ಮಾಸ್ತರ ಅವರು ಶನಿವಾರ ಕಾರವಾರದ ವೈಧ್ಯಕೀಯ ಕಾಲೇಜಿನಲ್ಲಿ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಜಗಧೀಶ ನಾಯಕ ಅವರು ಕಾರವಾರದ ಸಿವಿಲ್ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅವರು ಶನಿವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಶಿಕ್ಷಣ ಪ್ರೇಮಿ :
ಶಿಕ್ಷಣ ರಂಗವನ್ನು ತನ್ನ ಉಸಿರಾಗಿ ತೊಡಗಿಸಿಕೊಂಡಿದ್ದ ಜಗಧೀಶ ನಾಯಕ ಅವರು ಜಗಧೀಶ ಮಾಸ್ತರ ಎಂದೇ ಚಿರಪರಿಚಿತರಾಗಿದ್ದರು. ತುಂಬು ಗಡ್ಡ, ನಗು ಮುಖ, ಎಲ್ಲರನ್ನು ಆತ್ಮೀಯರಾಗಿ ಮಾತನಾಡಿಸುವ ಜಗಧೀಶ ಮಾಸ್ತರ ಅವರ ವ್ಯಕ್ತಿತ್ವ ಅಪರೂಪವಾಗಿ ಗಮನ ಸೆಳೆಯುವಂತಾಗಿತ್ತು.
ಪೂರ್ಣಪ್ರಜ್ಞಾ ಶಿಕ್ಷಣ ಮಹಾ ವಿದ್ಯಾಲಯವನ್ನು ಸ್ಥಾಪಿಸಿ ಸಹಸ್ರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಜಗಧೀಶ ಮಾಸ್ತರ, ತನ್ನ ಜೀವನ ಕೊನೆಯವರೆಗೆ ಸಂಸ್ಥೆಯ ಅಭಿವೃದ್ಧಿಗೆ ಹಗಲಿರಳು ದುಡಿದು ಶಿಕ್ಷಣದ ಸಂತ ಎಂದರೆ ತಪ್ಪಾಗಲಾರದು.
ತನ್ನ ವಿಶೇಷ ವ್ಯಕ್ತಿತ್ವದ ಮೂಲಕ ಜನಪ್ರೀಯರಾದ ಜಗಧೀಶ ಮಾಸ್ತರ ಅವರು ಪುರಸಭೆಯ ಸದಸ್ಯರಾಗಿ ಆಯ್ಕೆಯಾಗಿ ತನ್ನ ಕ್ಷೇತ್ರದ ಅಭಿವೃದ್ಧಿಗೆ ವಿಶೇಷವಾಗಿ ದುಡಿದು ಮಾದರಿಯಾಗಿದ್ದರು. ಅಂಕೋಲೆ ಶಿಕ್ಷಣ, ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಜಗಧೀಶ ನಾಯಕ ವರ ಕೊಡುಗೆ ಅಚ್ಚಳಿಯದೆ ಉಳಿಯುವಂತಾಗಿದ್ದು, ಜಗಧೀüಶ ಮಾಸ್ತರ ಅವರ ನಿಧನ ಸುದ್ದಿ ಅವರ ಆತ್ಮೀಯ ವಲಯದಲ್ಲಿ ಕರಿ ನೆರಳು ಚೆಲ್ಲಿದಂತಾಗಿದೆ.
ಜಗಧೀಶ ನಾಯಕ ಅವರು ತನ್ನ ಶರೀರವನ್ನು ಕಾರವಾರದ ವೈಧ್ಯಕೀಯ ಕಾಲೇಜಿನ ದಾನವಾಗಿ ನೀಡಿ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ.